ಕೌರಿ 

ಹೆಲಿಕ್ಟೀರಸ್ ಐಸೋರ ಎಂಬ ಶಾಸ್ತ್ರೀಯ ಹೆಸರಿನ ಮರ. ಸ್ಟಕ್ರ್ಯೂಲಿಯೇಸೀ ಕುಟುಂಬಕ್ಕೆ ಸೇರಿದೆ. ಎಡಮುರಿ, ಕವರ್ಗಿ ಇದರ ಪರ್ಯಾಯ ನಾಮಗಳು. ಭಾರತದ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.    (ಎ.ಕೆ.ಎಸ್.)
ಇದು ಸುಮಾರು 10'-15' ಎತ್ತರಕ್ಕೆ ಬೆಳೆಯುವ ಸಣ್ಣ ಗಾತ್ರದ ಮರ. ತೊಗಟೆ ಬೂದಿಬಣ್ಣದ್ದು, ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡಿವೆ. ಕಾಯಿಗಳು ಸುರುಳಿಯಂತೆ ಸುತ್ತಿಕೊಂಡಿರುತ್ತವೆ. ಇದರಿಂದಲೇ ಈ ಮರಕ್ಕೆ ಎಡಮುರಿ ಎಂಬ ಹೆಸರು ಬಂದಿದೆ.

ಕೌರಿಮರದ ಒಳತೊಗಟೆಯಿಂದ ಒಂದು ಬಗೆಯ ನಾರನ್ನು ಪಡೆಯಬಹುದು. ನಯವಾದುದೂ ರೇಶ್ಮೆಯಂತೆ ಹೊಳಪುಳ್ಳದ್ದೂ ಆದ ಈ ವಸ್ತು ಸೆಣಬಿನ ನಾರನ್ನು ಹೋಲುತ್ತದೆ. ಸೆಣಬು ನಾರಿಗಿಂತ ಕಡಿಮೆ ದರ್ಜೆಯದಾದರೂ ಇದನ್ನು ಹಗ್ಗ, ಚೀಲ ಮುಂತಾದವನ್ನು ಮಾಡಲು ಬಳಸುತ್ತಾರೆ. ಕೌರಿ ಮರದಿಂದ ಕಾಗದವನ್ನೂ ತಯಾರು ಮಾಡಲಾಗುತ್ತದೆ. ಇದರ ಎಲೆ ಮತ್ತು ಎಳೆಚಿಗುರುಗಳು ದನಗಳಿಗೆ ಉತ್ತಮ ಮೇವೂ ಹೌದು. ಇದರ ಒಣಕಾಯಿಗಳನ್ನು ಅತಿಸಾರ, ಹೊಟ್ಟೆನುಲಿತ ಮುಂತಾದ ವಿಕಾರಗಳಲ್ಲಿ ಔಷಧಿಯಾಗಿ ಬಳಸುವುದಿದೆ. 				 					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ